Saturday, July 6, 2019

ಕಸ ವಿಲೆವಾರಿ

ಅಂದು ದಿನವು ಬರುತ್ತಿದ ಕಸದವನು ಬಂದೇ ಇಲ್ಲ.   ಉಫ್ !
ಬೆಳಿಗೆ ಆರಕ್ಕೆ ಬರುತ್ತಿದ್ದ, ಎಂಟು ಘಂಟೆ ಆದರು ಯಾಕೆ ಇನ್ನು ಬರಲಿಲ್ಲ ಅಂತ ಯೋಚನೆ ಶುರುವಾಯಿತು.

ಸರಿ ನಮ್ಮ ಮನೆಯವರಿಗೆ ತಲೆ ತಿನ್ನಲ್ಲು ಶುರು ಮಾಡಿದೆ.
“ರೀ, ಇನ್ನು ಕಸದವನು ಬಂದಿಲ್ಲಾ”

ಉತ್ತರವೇ ಇಲ್ಲಾ,  ಕಸವೆಲ್ಲಾ ನನ್ನ ತಲೆ ಮೇಲೆ ಇದೆ ಅನಸ್ತು. ನಾಲ್ಕಾರು ಬಾರಿ ಕೇಳಿದಾಗ, ಇವರು ಆರಿದ ಬಿಸಿ ಕಾಫಿ ಮುಂದೆ ಕೂತು, ತನ್ಮಯರಾಗಿ ಓದುತ್ತಿದ್ದ ಮುಖಪುಸ್ತಕದಿಂದ ಮುಖ ತೆಗೆದು, “ಬರ್ತಾನೆ ತಾಳು” ಅಂತ ಹೇಳಿ ಮುಖಪುಸ್ತಕ ದಲ್ಲಿ ಮತ್ತೆ ತಮ್ಮ ಮುಖವನ್ನು ಮುಳುಗಿಸಿದರು.

ಸರಿ ರಾತ್ರಿ ಎಲ್ಲಾ ಓದಿ ಆಗ ತಾನೆ ಮಲಗಿದ್ದ ಮಗಳಿಗೆ ಹೇಳಿದೆ, “ಜಾಗು, ಕಸ ಇನ್ನು ಬಂದಿಲ್ಲಾ ಕಣೆ”.

ಅವಳಿಂದ ಉತ್ತರ ಇಲ್ಲ, ನಾಳೆ ಬರಬಹುದೆಂದು ಸುಮ್ಮನಾದೆ.

ಎರಡು, ಮೂರು, ನಾಲ್ಕು, ಐದು ದಿನವಾದರು ಕಸ ತೊಗೊಂಡು ಹೋಗಲು ಯಾರು ಬರಲ್ಲಿಲ್ಲ.

ಆಚೆ ಬಂದು ಎದುರು ಮನೆ, ಅಕ್ಕ ಪಕ್ಕ ಮನೆಗಳತ್ತ ನೋಡಿದೆ, ಎಲ್ಲಾರ ಮನೆಗಳಲ್ಲಿ ಕಸ ಡಬ್ಬಿಗಳು ಕಸದಿಂದ ತುಂಬಿ ತುಳುಕುತ್ತಿದವು.  ಅವರೆಲ್ಲರು ತಮ್ಮ ಪಾಡಿಗೆ ತಾವು ಕೆಲಸದಲ್ಲಿ busyಯಾಗಿದ್ದರು.

ಇನ್ನು ಎರಡು ದಿನ ಕಸ ವಿಲೆವಾರಿ ಆಗಲಿಲ್ಲ ಅಂದರೆ ಕಸ ಹಾಕುವುದು ಎಲ್ಲಿ ಎಂಬ ಕಸದ ಯೊಚನೆಯಲ್ಲಿ ತಲೆ ಸುತ್ತುವಂತೆ ಆಯ್ತು.

ಎಂದಿನಂತೆ ನಾನು ಕಸ ವಿಲೆವಾರಿ ಬಗ್ಗೆ ಯೋಚಿಸುತ್ತಾ ಕಲಸ ಕಾರ್ಯಗಳಲ್ಲಿ  ತೊಡಗಿದೆ.

ಏಳನೆ ದಿನ, ಸುಮಾರು ಎಂಟು ಗಂಟೆಗೆ, ಕಸ ಎಂದು ಕೂಗುತ್ತಾ, ಜೋರಾಗಿ ಸೀಟಿ ಊದುತ್ತಾ ಕಸ ತೆಗೆದುಕೊಂಡು ಹೋಗಲು ಗಾಡಿ ಒಂದು ಬಂತು. ಆಗ ನೋಡಬೇಕಿತ್ತು ನೆರೆ ಹೊರೆಯರ ಗಡಿಬಿಡಿ.  ಅಲ್ಲಿಯವರೆಗೆ ನೆಮ್ಮದಿಯಾಗಿದ್ದ ಜನರು ತುಳುಕುತ್ತಿದ್ದ ಕಸವನ್ನು ಹಾಕಲು ಬಂದರು.

ಒಂದೊಂದು ಮನೆಯಲ್ಲಿ ಐದು ಆರು ದಿನದ ಕಸ ಡಬ್ಬಗಳನ್ನು ತಂದು ಹಾಕಿದರು.

ನಾನು ಮನೆಗೆ ಬಂದ ಲಕ಼್ಮಿಯನ್ನು ಬರಮಾಡಿಕೊಳ್ಳುವಂತೆ ಕಸದ ಗಾಡಿಯನ್ನು ಸಂಭ್ರಮದಿಂದ ಬರಮಾಡಿಕೊಂಡೆ.

ಅಬ್ಬಾ!!!

ಅಂತು ಕಸ ವಿಲೆವಾರಿ ಆಯ್ತು.

ನೆಮ್ಮದಿಯ ಉಸಿರು ಬಿಟ್ಟು ಮನೆ ಒಳಗೆ ಬಂದೆ, ಮತ್ತೆ ಯಾವಾಗ ಬರುತ್ತಾನೆ ಕಸ ತೆಗೆದುಕೊಂಡು ಹೋಗಲು ಎಂದು ಯೋಚಿಸುತ್ತಾ!!!!


ಈಗ ನಮ್ಮ ಮನೆ ಕಸ ವಿಲೆವಾರಿ ಆಗಿ ಎಂಟು ದಿನವಾಯ್ತು …







ಮೊನ್ನೆ ಜಯನಗರಕ್ಕೆ ಹೋಗಬೇಕಾಯಿತು. ಸರಿ, ನನ್ನ ಮಗಳಿಗೆ ಹೇಳಿದೆ ಹೋಗಿ ಬರ್ತೆನೆ ಎಂದು. ಅವಳು ಹೇಳಿದಳು, “ಅಮ್ಮ ಒಬ್ಬೊಬ್ಬಳ್ಳೇ ಹೋಗಬೇಡ ನಾನು ಬರುತ್ತೀನಿ” ಅಂತ ಗಾಡಿ ತೆಗೆದು ಹೊರಟಳು.

ಮನಸ್ಸಿನಲ್ಲಿ ಯೋಚನೆ ಬಂತು, ಐವತ್ತು ಆದ ಕೂಡಲೆ ನನಗೆ ವಯ್ಯಸ್ಸಾಯಿತೆ?  ಅಥವ ನನ್ನ ಮಗಳಿಗೆ ನಾನು ವಯ್ಯಸಾದ ಹಾಗೆ ಕಾಣುತ್ತೇನೆಯೆ? ಇಷ್ಟು ದಿನ ಒಬ್ಬಳೆ ಹೋಗುತ್ತಿದ್ದೆ, ಆಗ ಏನು ಹೇಳುತ್ತಿರಲಿಲ್ಲ, ಈಗ ಅವಳ ಕಾಳಜಿ ನೋಡಿ ಆಶ್ಚರ್ಯವಾಯಿತು.

ಗಾಡಿಯಲ್ಲಿ ಕೂರುವಾಗ ಮಗಳು ಹೇಳಿದಳು, “ಅಮ್ಮ ಹುಷಾರು, ಸರಿಯಾಗಿ ಕಂಬಿ ಹಿಡಿದು ಕೂರು”.  ನಾನು ನಸುನಕ್ಕೆ ವಯಸ್ಸಾಯಿತೆಂದು.

ಬನಗಿರಿ ಏರು ರಸ್ತೆಯಲ್ಲಿ ಹೋಗುವಾಗ, ನನ್ನ ತಲೆ ಐವತ್ತು ವಯ್ಯಸಾದ ನಂತರದ ಜೀವನದ ಬಗ್ಗೆ ಯೋಚಿಸುತ್ತಿತ್ತು.

ಜಯನಗರದಲ್ಲಿ ರಸ್ತೆ ದಾಟಲು ಹೊರಟೆ. ಗಾಡಿ ನಿಲ್ಲಿಸುತ್ತಿದ್ದ ಮಗಳೆಂದಳು “ಅಮ್ಮ ಸ್ವಲ್ಪ ತಡಿ, ನಾನು ಜೊತೆಯಲ್ಲಿ ಬರುತ್ತೀನಿ” ಎಂದು.

ರಸ್ತೆ ದಾಟುವಾಗ ಎಂದೂ ಹಿಡಿಯದ ಕೈ ಹಿಡಿದು, ಹುಷಾರಾಗಿ ರಸ್ತೆ ದಾಟಿಸಿದಳು.

ಅವಳು ಸಣ್ಣವಳಿದ್ದಾಗ ನಾನು ಅವಳ ಕೈ ಹಿಡಿದು ರಸ್ತೆ ದಾಟಿಸುತ್ತಿದದ್ದು ನೆನಪಾಯಿತು.

ನನ್ನ ಕೈ ಹಿಡಿದ ಅವಳ ಕೈ ನೋಡುತ್ತ, ನಾನು ಅವಳ ಮುಖ ನೋಡಿದೆ.   ಅವಳ ಮುಖದಲ್ಲಿ ಎಂದೂ ಕಾಣದ ದೃಡತೆ, ಕಾಳಜಿ ಕಂಡು ಅವಳ ಕೈಯನ್ನು ಗಟ್ಟಿಯಾಗಿ ಹಿಡಿದು ಮುಂದೆ ನಡೆದೆ.